ವೆಂಕಟರಾವ್, ಆಲೂರ
	1880-1964. ಕರ್ನಾಟಕದ ಏಕೀಕರಣ ಕ್ಕಾಗಿ ಶ್ರಮಿಸಿದವರು. ಪತ್ರಿಕೋದ್ಯಮಿ ಮತ್ತು ಸಾಹಿತಿಗಳು. ಕರ್ನಾಟಕ ಕುಲಪುರೋಹಿತ ಎಂಬ ಅಭಿಧಾನಕ್ಕೆ ಪಾತ್ರರಾಗಿದ್ದರು. ಇವರ ಮನೆತನ ದವರು ಮೊದಲು ಬಳ್ಳಾರಿ ಜಿಲ್ಲೆಯಲ್ಲಿದ್ದು ಅನಂತರ ಧಾರವಾಡ ಜಿಲ್ಲೆಯ ಆಲೂರಿಗೆ ಬಂದು ನೆಲೆಸಿದರು. ಇದರಿಂದಾಗಿ ಇವರ ಮನೆತನಕ್ಕೆ ಆಲೂರ ಮನೆತನ ಎಂದು ಹೆಸರು ಬಂತು. ಇವರು ಬಿಜಾಪುರದಲ್ಲಿ 1880 ಜುಲೈ 12ರಂದು ಜನಿಸಿದರು. ತಂದೆ ಭೀಮರಾಯರು ಶಿರಸ್ತೇದಾರ ರಾಗಿದ್ದರು. ಬಿಜಾಪುರ ಮತ್ತು ಧಾರವಾಡದಲ್ಲಿ ಆರಂಭದ ಶಿಕ್ಷಣ ಮುಗಿಸಿದ ಇವರು ಪುಣೆಯ ಫಗ್ರ್ಯೂಸನ್ ಕಾಲೇಜ್ ಸೇರಿ ಬಿ.ಎ. ಪದವಿ ಪಡೆದರು(1903). ಅನಂತರ ಮುಂಬಯಿಯಲ್ಲಿ ಕಾನೂನು ವ್ಯಾಸಂಗಮಾಡಿ ಎಲ್‍ಎಲ್.ಬಿ. ಪದವಿ ಪಡೆದು(1905) ಧಾರವಾಡದಲ್ಲಿ ವಕೀಲ ವೃತ್ತಿ ಆರಂಭಿಸಿದರು.

	ಇವರು ವ್ಯಾಸಂಗಕ್ಕಾಗಿ ಪುಣೆಯಲ್ಲಿದ್ದಾಗ ಅಲ್ಲಿ ನಡೆಯುತ್ತಿದ್ದ ರಾಜಕೀಯ ಚಟುವಟಿಕೆಗಳಿಂದ ಪ್ರಭಾವಿತರಾದರಲ್ಲದೆ, ಬಾಲಗಂಗಾಧರ ತಿಲಕರು ನಡೆಸುತ್ತಿದ್ದ ಕೇಸರಿ ಪತ್ರಿಕೆಯಿಂದ ಆಕರ್ಷಿತರಾಗಿ, ದೇಶ ಹಾಗೂ ಭಾಷಾ ಪ್ರೇಮವನ್ನು ಮೈಗೂಡಿಸಿಕೊಂಡರು. ಪುಣೆಯಲ್ಲಿ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ವಾಸವಾಗಿದ್ದರೂ ಅಲ್ಲಿ ಕನ್ನಡ ಭಾಷೆಗೆ ಮನ್ನಣೆ ಇರಲಿಲ್ಲ. ಇವರು ತಮ್ಮ ಗೆಳೆಯರೊಂದಿಗೆ ಪುಣೆಯಲ್ಲಿ ಕನ್ನಡದ ವಾತಾವರಣ ಮೂಡಿಸಲು ಪ್ರಯತ್ನಿಸಿದರು. ಇವರು ಧಾರವಾಡದಲ್ಲಿ ವಕೀಲವೃತ್ತಿ ಆರಂಭಿಸಿದ ದಿನಗಳಲ್ಲಿ ದೇಶದ ತುಂಬ ರಾಷ್ಟ್ರೀಯ ಚಳವಳಿಯ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿ ದ್ದುವು. ಈ ಚಳವಳಿಯಿಂದ ಪ್ರಭಾವಿತರಾಗಿ ಇವರು ಜನತೆಯಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಕೆಲಸ ದಲ್ಲಿ ತೊಡಗಿದರು. ಅದಕ್ಕಾಗಿ ಧಾರವಾಡದಲ್ಲಿ ರಾಷ್ಟ್ರೀಯ ಶಾಲೆಯನ್ನು ಆರಂಭಿಸಿ ದರಲ್ಲದೆ, ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದು ಜನತೆಗೆ ರಾಷ್ಟ್ರೀಯ ಮಹತ್ತ್ವವನ್ನು ತಿಳಿಸಿದರು. ರಾಷ್ಟ್ರೀಯ ಚಳವಳಿಯ ಪ್ರಚಾರಕ್ಕಾಗಿ ಇವರು ಅನೇಕ ಊರುಗಳನ್ನು ಸಂದರ್ಶಿಸಿದರು. ಇವರು ಸುಪ್ರಸಿದ್ಧ ಐತಿಹಾಸಿಕ ಸ್ಥಳಗಳಾದ ಆನೆಗೊಂದಿ ಮತ್ತು ಹಂಪೆಗೆ ಹೋದರು(1905). ಅಲ್ಲಿ ಕರ್ನಾಟಕದ ಪ್ರಾಚೀನ ವೈಭವ ಕಂಡ ಇವರಿಗೆ ಕರ್ನಾಟಕ ದೇವಿಯನ್ನು ಪ್ರತ್ಯಕ್ಷ ಕಂಡ  ಅನುಭವ  ಆಯಿತು. ಅಂದಿನಿಂದ ಅವರು ಕರ್ನಾಟಕತ್ವದ ತಪಸ್ಸನ್ನು ಕೈಗೊಂಡರು. ಚದರಿಹೋಗಿದ್ದ ಕನ್ನಡ ಭಾಗಗಳನ್ನು ಒಂದುಗೂಡಿಸುವುದು ಮತ್ತು ಕನ್ನಡ ಭಾಷೆಯನ್ನು ಬೆಳೆಸುವುದೇ ಇವರ ಆ ತಪಸ್ಸಿನ ಮುಖ್ಯ ಗುರಿ. ಅದಕ್ಕಾಗಿ ಇವರು ತಮ್ಮ ಬದುಕಿನುದ್ದಕ್ಕೂ ಶ್ರಮಿಸಿದರು.

	ಕನ್ನಡದ ಜತೆಗೆ ಸಂಸ್ಕøತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವ ಸಂಪಾದಿಸಿದ್ದ ಇವರು ಮೇಲ್ಮಟ್ಟದಲ್ಲಿ ಸಾಹಿತ್ಯಸೃಷ್ಟಿ ಮಾಡಿದರು. ರಾಷ್ಟ್ರೀಯ ಚಳವಳಿಯ ಪ್ರಚಾರಕ್ಕಾಗಿ ಇವರು ಕನ್ನಡನಾಡಿನುದ್ದಕ್ಕೂ ಸಂಚರಿಸಿದರು. ತಮ್ಮ ಸಂಚಾರದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಶಾಸನ, ನಾಣ್ಯ ಮತ್ತು ಪ್ರಾಚೀನ ಗ್ರಂಥಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿದರು. ಅದರಿಂದ ಇವರಿಗೆ ಕರ್ನಾಟಕ ಗತವೈಭವದ ಬಗ್ಗೆ ಒಂದು ಸ್ಪಷ್ಟ ಚಿತ್ರ ಮೂಡಿತು. ಇವರು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಈ ವಿಷಯ ಕುರಿತು ಇಂಗ್ಲಿಷಿನಲ್ಲಿ ಉಪನ್ಯಾಸ ಮಾಡಿದರು(1914). ಈ  ಉಪನ್ಯಾಸಗ ಳನ್ನು ಮೆಚ್ಚಿಕೊಂಡ ಅಲ್ಲಿಯ ವಿದ್ಯಾರ್ಥಿಗಳು ವೆಂಕಟರಾಯರಿಗೆ ಒಂದು ನೂರು ರೂಪಾಯಿ ಕಾಣಿಕೆಕೊಟ್ಟರು. ಆ ಉಪನ್ಯಾಸಗಳನ್ನು ಅನಂತರ ಇವರು ಕನ್ನಡಕ್ಕೆ ಅನುವಾದಿಸಿ ಕರ್ನಾಟಕ ಗತವೈಭವ ಎಂಬ ಹೆಸರಿನಲ್ಲಿ ಪುಸ್ತಕವಾಗಿ ಪ್ರಕಟಿಸಿದರು (1917). ಕಾವ್ಯ, ಸಾಹಿತ್ಯ, ಇತಿಹಾಸ, ರಾಜಕಾರಣ ಮತ್ತು ಉಜ್ಜ್ವಲ ದೇಶಾಭಿಮಾನದಿಂದ ಕೂಡಿರುವ ಈ ಪುಸ್ತಕದಿಂದ ಕನ್ನಡಿಗರು ಬಹಳಷ್ಟು ಪ್ರಭಾವಿತರಾದರು. ಕರ್ನಾಟಕ ವೀರ ರತ್ನಗಳು (1930) ಎಂಬುದು ಇವರ ಇನ್ನೊಂದು ಗ್ರಂಥ. ಧೈರ್ಯ ಸಾಹಸಗಳಿಗೆ ಹೆಸರಾಗಿದ್ದ ಮಯೂರವರ್ಮ, ಪುಲಕೇಶಿ ಕುಮಾರರಾಮ ಮುಂತಾದ 21 ಜನ ಸಾಹಸಿ ಕನ್ನಡಿಗರ ವ್ಯಕ್ತಿಚಿತ್ರಗಳು ಈ ಗ್ರಂಥದಲ್ಲಿ ತುಂಬಿಕೊಂಡಿವೆ. ಕರ್ನಾಟಕತ್ವದ ಸೂತ್ರಗಳು (1950) ಮತ್ತು ಕರ್ನಾಟಕತ್ವದ ವಿಕಾಸ (1957) ಇವು ನಾಡಿಗೆ ಸಂಬಂಧಿಸಿದಂತೆ ಇವರು ರಚಿಸಿರುವ ಇತರ ಗ್ರಂಥಗಳು. ಕನ್ನಡಿಗರ ಭ್ರಮನಿರಸ ಎಂಬ ನಾಟಕ, ಶ್ರೀವಿದ್ಯಾರಣ್ಯ ಚರಿತ್ರೆ ಎಂಬ ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ಬಾಲಗಂಗಾಧರ ತಿಲಕರ ಗೀತಾರಹಸ್ಯವನ್ನು ಅದೇ ಹೆಸರಿನಿಂದ ಕನ್ನಡಕ್ಕೆ ತಂದಿದ್ದಾರೆ. ಅದಕ್ಕಾಗಿ ಇವರು ಭಗವದ್ಗೀತೆಯನ್ನು ವಿಸ್ತಾರವಾಗಿ ಅಭ್ಯಾಸ ಮಾಡಿದರು. ಇದರ ಫಲವಾಗಿ ಗೀತಾ ಪ್ರಕಾಶ (1934), ಗೀತಾಪರಿಮಳ (1936), ಗೀತಾಸಂದೇಶ (1936) ಎಂಬ ಗ್ರಂಥಗಳನ್ನು ರಚಿಸಿದರು. ಮಧ್ವಮತದ ತತ್ತ್ವಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದ್ದ ಇವರು ಅವನ್ನು ಶ್ರೀಸಾಮಾನ್ಯರಿಗೆ ಸರಳವಾಗಿ  ತಿಳಿಸಿಕೊಡಬೇಕೆಂಬ ಉದ್ದೇಶದಿಂದ ಮಧ್ವಸಿದ್ಧಾಂತ ಪ್ರವೇಶಿಕೆ (1951), ಶ್ರೀಮಧ್ವಾಚಾರ್ಯರ ಮೂಲಸಿದ್ಧಾಂತ, ಶ್ರೀಮದ್ವಾಚಾರ್ಯರ ಪೂರ್ಣಬ್ರಹ್ಮವಾದ ಮುಂತಾದ ಗ್ರಂಥಗಳನ್ನು ಬರೆದು ಪ್ರಕಟಿಸಿದರು. ಇವುಗಳಲ್ಲಿ ಕೊನೆಯ ಗ್ರಂಥವನ್ನು ಇಂಗ್ಲಿಷಿಗೂ ಅನುವಾದಿಸಿದರು. ತಮ್ಮ ಜೀವನದ ಅನುಭವಗಳನ್ನು ನನ್ನ ಜೀವನ ಸ್ಮøತಿಗಳು ಎಂಬ ಹೆಸರಿನಲ್ಲಿ ಎರಡು ಭಾಗಗಳಲ್ಲಿ ಪ್ರಕಟಿಸಿದ್ದಾರೆ. 

	ಸಾಹಿತ್ಯ ಸೇವೆಯ ಜತೆಗೆ ಇವರು ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಧಾರವಾಡದಲ್ಲಿ ಕರ್ನಾಟಕ ಗ್ರಂಥ ಪ್ರಕಟಣ ಮಂದಿರ ಎಂಬ ಸಾಹಿತ್ಯಕ ಸಂಸ್ಥೆಯನ್ನು ಆರಂಭಿಸಿದರು(1908). ಕರ್ನಾಟಕ ಇತಿಹಾಸ ಮಂಡಳ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು(1914). ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಗಾಗಿಯೂ ಇವರು ಶ್ರಮಿಸಿದರು.

	ಕನ್ನಡ ಪತ್ರಿಕಾ ರಂಗದಲ್ಲೂ ಇವರು ಸೇವೆಸಲ್ಲಿಸಿದ್ದಾರೆ. ವಾಗ್ಭೂಷಣ ಎಂಬ ಮಾಸಪತ್ರಿಕೆಯನ್ನು ಆರಂಭಿಸಿ(1906) ಸ್ವಲ್ಪಕಾಲ ನಡೆಸಿದರು. ಜಯಕರ್ನಾಟಕ ಪತ್ರಿಕೆಯನ್ನು ಆರಂಭಿಸಿ ಸುಮಾರು 6 ವರ್ಷಗಳ ಕಾಲ ನಡೆಸಿದರು(1923). ಕನ್ನಡಿಗ, ಕರ್ಮವೀರ ಮುಂತಾದ ಪತ್ರಿಕೆಗಳ ಸಂಪಾದನ ಕಾರ್ಯವನ್ನೂ ಸ್ವಲ್ಪಕಾಲ ನಿರ್ವಹಿಸಿದರು. 

	ಕರ್ನಾಟಕದ ಏಕೀಕರಣಕ್ಕಾಗಿ ಬಹಳವಾಗಿ ಶ್ರಮಿಸಿದ ಇವರು 1956ರಲ್ಲಿ ರಾಜ್ಯೋದಯವನ್ನು ಕಂಡು ಸಂತೋಷಪಟ್ಟರು. ಆ ಸಂದರ್ಭ ದಲ್ಲಿ ಹಂಪೆಯಲ್ಲಿ ನಡೆದ ಭುವನೇಶ್ವರಿ ಪೂಜೆಯ ಪೌರೋಹಿತ್ಯವನ್ನು ವಹಿಸಿದರು.

	ಇವರು ಸಲ್ಲಿಸಿದ ನಾಡುನುಡಿಗಳ ಸೇವೆಗಾಗಿ ಇವರಿಗೆ ಹಲವು ಬಗೆಯ ಗೌರವಗಳು ದೊರೆತವು. ಹೈದರಾಬಾದ್ ಕನ್ನಡಿಗರು ಇವರಿಗೆ ಕರ್ನಾಟಕ ಕುಲಪುರೋಹಿತ ಎಂಬ ಬಿರುದನ್ನು ನೀಡಿ ಸನ್ಮಾನಿಸಿದರು (1941). ಬೆಂಗಳೂರು ನಗರಸಭೆ ಇವರನ್ನು ಸನ್ಮಾನಿಸಿತು(1961). ಮೈಸೂರಿನಲ್ಲಿ ನಡೆದ 16ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು(1930).   	 ತಮ್ಮ ಜೀವನದ ಕೊನೆಯತನಕವೂ ನಾಡು ನುಡಿಗಳ ಮೇಲ್ಮೆಯನ್ನು ಹಾರೈಸುತ್ತಿದ್ದ ಇವರು 1964 ಫೆಬ್ರವರಿ 25ರಂದು ನಿಧನರಾದರು. 
												(ವಿ.ಎಚ್.ಯು.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ